ಪಾವಗಡ -
ಭಾರತದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಆಡಳಿತ ಕೇಂದ್ರ. ತಾಲ್ಲೂಕು ತುಮಕೂರು ಜಿಲ್ಲೆಯ ಅವಿಚ್ಛಿನ್ನ ಭಾಗವಾಗಿರದೆ ಪಶ್ಚಿಮದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿಗೆ ಅಂಟಿಕೊಂಡಂತಿದೆ. ಉಳಿದ ಮೂರು ಕಡೆ ಆಂಧ್ರಪ್ರದೇಶ ರಾಜ್ಯ ಸುತ್ತುವರಿದಿದೆ. ತುಮಕೂರು ಜಿಲ್ಲೆಗೂ ಪಾವಗಡ ತಾಲ್ಲೂಕಿಗೂ ನಡುವೆ ಆಂಧ್ರಪ್ರದೇಶದ ಮಡಕ ಶಿರಾ ತಾಲ್ಲೂಕು ಇದೆ. ಪಾವಗಡ 1886 ರವರೆಗೆ ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆ ವರ್ಷ ಇದನ್ನು ತುಮಕೂರು ಜಿಲ್ಲೆಗೆ ಸೇರಿಸಲಾಯಿತು. ಈಗ ಇದು ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗಕ್ಕೆ ಸೇರಿದ ತಾಲ್ಲೂಕಾಗಿದೆ. ಈ ತಾಲ್ಲೂಕಿನಲ್ಲಿ ನಿಡುಗಲ್ಲು, ಹೊಸಕೋಟೆ, ಪಾವಗಡ ಮತ್ತು ನಾಗಲಮಡಿಕೆ ಹೋಬಳಿಗಳು 144 ಗ್ರಾಮಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ 1.35 ಚ.ಕಿ.ಮೀ. ತಾಲ್ಲೂಕು ಜನಸಂಖ್ಯೆ 2,46,238 (2001). 

ತಾಲ್ಲೂಕಿನ ಮಧ್ಯೆ ಕಣಶಿಲೆಯ ಬೆಟ್ಟಗಳು ಉತ್ತರದಿಂದ ದಕ್ಷಿಣಕ್ಕೆ ಹಬ್ಬಿವೆ. ಈ ಶ್ರೇಣಿಯ ಪ್ರಮುಖ ಬೆಟ್ಟಗಳು ಕಾಮನದುರ್ಗ (1.077) ಮೀ. ನಿಡುಗಲ್ಲು ಬೆಟ್ಟ (1.149 ಮೀ.) ಮತ್ತು ಪಾವಗಡ ಬೆಟ್ಟ (918 ಮೀ.) ಪಾವಗಡ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಪ್ರಶಸ್ತ ಶಿಲೆಗಳು ದೊರಕುವುವೆಂದು ಹೇಳಲಾಗಿದೆ. ಉತ್ತರ ಪಿನಾಕಿನಿ ನದಿ ಈ ತಾಲ್ಲೂಕಿನ ಪೂರ್ವದಲ್ಲಿ ಸುಮಾರು 5 ಕಿ.ಮೀ. ದೂರ ಹರಿದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಸಾಗುತ್ತದೆ. ತಾಲ್ಲೂಕಿನಲ್ಲಿ ಬಂಜರು ನೆಲ ಅಧಿಕ. ಕುರುಚಲು ಸಸ್ಯದ ಕಾಡುಗಳಿವೆ. ವನ್ಯಮೃಗಗಳು ಜಿಂಕೆ ಮತ್ತು ಕಾಡು ಹಂದಿ. ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ತಾಲ್ಲೂಕು ಪಾವಗಡ. ತಾಲ್ಲೂಕಿನ ನೈಋತ್ಯ ಹಾಗೂ ಉತ್ತರ ಭಾಗಗಳ ಕಣಿವೆಗಳಲ್ಲಿ ತೆಂಗು ಹಾಗೂ ಅಡಕೆ ಬೆಳೆಯುತ್ತವೆ.

ಮಳೆಯ ಅಭಾವದಿಂದಾಗಿ ತರಿ ಬೆಳೆಗೆ ಅನುಕೂಲವಿಲ್ಲ. ತೊರೆಗಳ ಅಂಚಿನಲ್ಲಿ ಚಿಲುಮೆಗಳನ್ನು ತೋಡಿ ಏತಗಳಿಂದ ನೀರು ಹಾಯಿಸುವ ತಲಪರಿಗೆ ನೀರಾವರಿ ಪದ್ಧತಿ ರೂಢಿಯಲ್ಲಿದೆ. ಬೇಸಗೆಯಲ್ಲಿ ಈ ಚಿಲುಮೆಗಳು ಬತ್ತಿ ಹೋಗಿರುತ್ತವೆ. ಪ್ರಧಾನ ಬೆಳೆಗಳು ರಾಗಿ, ಹತ್ತಿ, ಬತ್ತ, ಹುರುಳಿ, ಕಡಲೇಕಾಯಿ, ಕಂಬಳಿ ನೇಯ್ಗೆ ಒಂದು ಮುಖ್ಯ ಕಸುಬು.

ಪಾವಗಡ ತಾಲ್ಲೂಕಿನ ರಸ್ತೆಗಳ ಪೈಕಿ ಮಡಕಶಿರಾ ಮೂಲಕ ಸಾಗುವ ಮಧುಗಿರಿ-ಪಾವಗಡ ರಸ್ತೆ. ಚಳ್ಳಕೆರೆ ರಸ್ತೆ, ಪಾವಗಡ-ಪೆನುಕೊಂಡ ರಸ್ತೆ, ತಾಲ್ಲೂಕಿನ ರಾಚರ್ಲು ಮೂಲಕ ಸಾಗುವ ಬೆಂಗಳೂರು-ಬಳ್ಳಾರಿ ಹಳೆಯ ರಸ್ತೆ ಇವು ಮುಖ್ಯವಾದುವು.
ನಿಡುಗಲ್ಲು, ಗುಂಡಲಹಳ್ಳಿ, ಬಂಗಾರನಾಯಕನಬೆಟ್ಟ, ಪಾವಗಡ ಇವು ತಾಲ್ಲೂಕಿನ ಪ್ರಮುಖ ಸ್ಥಳಗಳು. ನಿಡುಗಲ್ಲು ಪಾವಗಡ ಪಟ್ಟಣಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿದೆ. ನಿಡುಗಲ್ಲು ಗ್ರಾಮದ ಪಕ್ಕದಲ್ಲಿ ಇದೇ ಹೆಸರಿನ ಬೆಟ್ಟವಿದೆ. ನಿಡುಗಲ್ಲು ಪಾವಗಡ ತಾಲ್ಲೂಕಿನ ಹೋಬಳಿಗಳಲ್ಲೊಂದು. ಇದು ಹಿಂದೆ ಒಂದು ಪಾಳೆಯಪಟ್ಟು ಆಗಿತ್ತು. ಗ್ರಾಮ ಹಾಗೂ ಬೆಟ್ಟದಲ್ಲಿ ಹಲವು ದೇವಾಲಯಗಳಿವೆ. ಬೆಟ್ಟಕ್ಕೆ ಹಲವು ಸಾಲು ಕೋಟೆಗೋಡೆಗಳಿವೆ. ಮಾತನೂರು ಬಾಗಿಲು, ಸಿಂಗಾರದ ಬಾಗಿಲು, ಸಿಂಹಲಯ್ಯನ ಬಾಗಿಲು, ದಿಡ್ಡಿ ಬಾಗಿಲು ಎಂಬವು ದ್ವಾರಗಳು. ಕಣಜಗಳೂ ಬಂದೂಕಿನ ಮದ್ದನ್ನಿಡುತ್ತಿದ್ದ ನೆಲಮಾಳಿಗೆಗಳೂ ಇವೆ. 9-10 ನೆಯ ಶತಮಾನಗಳಲ್ಲಿ ಈ ದುರ್ಗ ನೊಳಂಬರ ವಶದಲ್ಲಿತ್ತು. ತರುವಾಯ ಇದನ್ನು ಚೋಳರು ಗೆದ್ದುಕೊಂಡರು. ಚೋಳರಲ್ಲಿ ಇರುಂಗೋಳ ಎಂಬುವನು ಚಾಳುಕ್ಯರ ಸಾಮಂತನಾಗಿದ್ದ. ಇಮ್ಮಡಿ ಬಲ್ಲಾಳ ಈ ದುರ್ಗವನ್ನು ಹೊಯ್ಸಳ ರಾಜ್ಯಕ್ಕೆ ಸೇರಿಸಿಕೊಂಡ. ವಿಜಯನಗರದ ಅರಸರ ಕಾಲದಲ್ಲಿ ಪಾಳೆಯಗಾರರ ತಿಪ್ಪರಾಜನ ವಂಶಜರು ಇದನ್ನು ಆಳುತ್ತಿದ್ದರು. ಹೈದರ್ 1761 ರಲ್ಲಿ ಶಿರಾ ಪಟ್ಟಣವನ್ನು ವಶಪಡಿಸಿಕೊಂಡ ಮೇಲೆ ನಿಡುಗಲ್ಲು ಅವನಿಗೆ ಸೇರಿತು. ಟಿಪ್ಪು ಇಲ್ಲಿಯ ಪಾಳೆಯಗಾರರನ್ನು ಸೆರೆಹಿಡಿದು ಶ್ರೀರಂಗಪಟ್ಟಣಕ್ಕೆ ಸಾಗಿಸಿದ. ಗುಂಡಲಹಳ್ಳಿಯಲ್ಲಿ ಅಕಲೇಟಿ ಎಂಬಾಕೆ 754 ರಲ್ಲಿ ಕಟ್ಟಿಸಿದ ಅಕಲೆ ಸಮುದ್ರವೆಂಬ ಕೆರೆ ಇದೆ. ಇಲ್ಲಿ ರಾಮದೇವರ ಗುಡಿಯೂ 3 ಮೀ. ಎತ್ತರದ ಆಂಜನೇಯ ವಿಗ್ರಹವಿರುವ ಮಾರುತಿ ಗುಡಿಯೂ ಇವೆ. ಬಂಗಾರನಾಯಕನ ಬೆಟ್ಟದಲ್ಲಿ ಕಂಬದ ರಾಯನ ಗುಡಿಯಿದೆ. ಇಲ್ಲಿ ವಿಗ್ರಹಕ್ಕೆ ಬದಲಾಗಿ ಕಲ್ಲಿನ ಕಂಬವಿದೆ.

ಪಾವಗಡ ಪಟ್ಟಣ ಈ ತಾಲ್ಲೂಕಿನ ಆಡಳಿತ ಕೇಂದ್ರ. ತುಮಕೂರಿಗೆ ಸುಮಾರು 10 ಕಿ.ಮೀ. ದೂರದಲ್ಲಿದೆ. ಆಂಧ್ರಪ್ರದೇಶದ ಪೆನುಕೊಂಡ ಇಲ್ಲಿಗೆ ಸುಮಾರು 30 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 28,036 (2001). 
ಇಲ್ಲಿ ನಾಗರಶಿಲ್ಪವಿದ್ದ ಶಿಲೆ ಸಿಕ್ಕಿದ ಕಾರಣ ಇದಕ್ಕೆ ಪಾವಗಡ ಅಥವಾ ಪಾಮುಕೊಂಡ (ಸರ್ಪಗಳ ಬೆಟ್ಟ) ಎಂಬ ಹೆಸರಾಯಿತೆನ್ನಲಾಗಿದೆ. ಪಟ್ಟಣದ ಸಮೀಪದ ಬೆಟ್ಟಕ್ಕೂ ಅದೇ ಹೆಸರು. 

ಪಾವಗಡ ಹಿಂದೆ ದರೋಡೆಕಾರರ ನೆಲೆಯಾಗಿತ್ತೆನ್ನಲಾಗಿದೆ. ಇದನ್ನು 1585 ರಲ್ಲಿ ವಶಪಡಿಸಿಕೊಂಡ ಬಳ್ಳಪ್ಪನಾಯಕ ಇಲ್ಲಿಯ ಪಾಳೆಯಗಾರರ ಮೂಲ ಪುರುಷ. ಹೈದರ್ ಪಾವಗಡವನ್ನು ವಶಪಡಿಸಿಕೊಂಡಾಗ ಆಗ ಪಾಳೆಯಗಾರನಾಗಿದ್ದ ತಿಮ್ಮಪ್ಪ ನಾಯಕನನ್ನು ಕುಟುಂಬ ಸಮೇತ ಸೆರೆ ಹಿಡಿದು ಮಧುಗಿರಿ ಕೋಟೆಯಲ್ಲಿ ಬಂಧಿಸಿದನಲ್ಲದೆ ಪಾವಗಡ ಕೋಟೆಯನ್ನು ಬಲಪಡಿಸಿದ. (177) ಶ್ರೀರಂಗಪಟ್ಟಣದ ಮುತ್ತಿಗೆಯಲ್ಲಿ ಲಾರ್ಡ್ ಕಾರ್ನ್‍ವಾಲೀಸನ ನೆರವಿಗೆ ಬಂದ ಮರಾಠರು ಮಧುಗಿರಿಯನ್ನು ವಶಪಡಿಸಿಕೊಂಡು ತಿಮ್ಮಪ್ಪ ನಾಯಕನನ್ನು ಸೆರೆಯಿಂದ ಬಿಡಿಸಿದರು. ಅವನು ಮತ್ತೆ ಪಾವಗಡವನ್ನು ಗೆದ್ದುಕೊಂಡ. ಆದರೆ ಶ್ರೀರಂಗಪಟ್ಟಣದ ಕೌಲಿನ (1792) ತರುವಾಯ ಟೀಪುವಿನ ಸೈನ್ಯಗಳ ಎದುರು ಅವನು ಪಾವಗಡವನ್ನು ಉಳಿಸಿಕೊಳ್ಳಲಾರದೇ ಹೋದ.

ಪಾವಗಡ, ಪಾವಗಡ ಬೆಟ್ಟ ಇವೆರಡಕ್ಕೂ ಕೋಟೆಗಳಿವೆ. ಬೆಟ್ಟದ ತುದಿಗೂ ತಪ್ಪಲಿಗೂ ನಡುವೆ 10 ದ್ವಾರಗಳಿವೆ. ತಪ್ಪಲಲ್ಲಿ ಕಮ್ಮಾರ ಮಂಟಪವೂ ಮೇಲೆ ಕೊನೇರಿ ದೊಣೆ, ಕೊನೇರಿ ಮಂಟಪ ಹಾಗೂ ತುಪ್ಪದ ಕಣಜಗಳೂ ಬೆಟ್ಟದ ಮೇಲೆ ಸುಲ್ತಾನ್ ಬತೇರಿಯೂ ಇವೆ. ಕೊನೇರಿ ದೊಣೆಯಲ್ಲದೆ ಬೆಟ್ಟದ ಮೇಲೆ ಇರುವ ಇತರ ಚಿಲುಮೆಗಳು ಅಕ್ಕಮ್ಮನ ದೊಣೆ. ಬಾಬೈಯನ ಕೆರೆ, ಭೀಮನ ದೊಣೆ. ಭೀಮನ ದೊಣೆಗೂ ಬೆಟ್ಟದ ತಪ್ಪಲಿನ ದೊಣೆಗೂ ಸಂಬಂಧವಿದೆಯೆಂದೂ ಹೇಳುತ್ತಾರೆ. ಅಪರಾಧಿಗಳನ್ನು ಬೆಟ್ಟದ ತುದಿಯಿಂದ ಕೆಳಕ್ಕೆ ತಳ್ಳುತ್ತಿದ್ದ ಸ್ಥಳ ಬೆಟ್ಟದ ಮೇಲಿದೆ. ಮಧುಗಿರಿ ಬೆಟ್ಟದಲ್ಲಿರುವಂತೆ ಇಲ್ಲಿ ಸಹ ರಾಗಿ ಬತ್ತಗಳ ಕಣಜಗಳು ಹಾಗೂ ಫಿರಂಗಿ ಬಂದೂಕು ಮದ್ದು ಗುಂಡುಗಳನ್ನಿಡುತ್ತಿದ್ದ ಮನೆಗಳು ಇವೆ. ಬೆಟ್ಟದ ತಪ್ಪಲಲ್ಲಿ ಹಾಗೂ ಪಟ್ಟಣದಲ್ಲಿ ಗೋಪಾಲಸ್ವಾಮಿಯ ಗುಡಿಗಳಿವೆ. ಬೆಟ್ಟದ ಮೇಲಿನ ಶಾಸನವೊಂದರ ಪ್ರಕಾರ ವಿಜಯನಗರದ 1 ನೆಯ ದೇವರಾಜನ ದಂಡನಾಯಕ ಗೋಪಣ್ಣ 1405 ರಲ್ಲಿ ಇಲ್ಲಿಯ ಕೋಟೆಯನ್ನು ಕಟ್ಟಿಸಿದ.

ಪಾವಗಡ ಪಟ್ಟಣದ ಪೌರಸಭೆ 1951 ರಲ್ಲಿ ಸ್ಥಾಪಿತವಾಯಿತು. ಪಟ್ಟಣದಲ್ಲಿ ತಾಲ್ಲೂಕು ಬೋರ್ಡ್ ಕಛೇರಿ. ತಾಲ್ಲೂಕು ಕಛೇರಿ, ಪ್ರೌಢಶಾಲೆ ಆಸ್ಪತ್ರೆ ಮುಂತಾದುವು ಇವೆ.

ಪಾವಗಡ ತಾಲ್ಲೂಕಿನಲ್ಲಿ ನಡೆಯುವ ಪ್ರಮುಖ ಜಾತ್ರೆಗಳು ಇವು: ಪಾವಗಡ ಶನಿಮಹಾತ್ಮ ದೇವರ ಜಾತ್ರೆ (ಫೆಬ್ರವರಿ), ನಾಗಲಮಡಿಕೆಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ಜಾತ್ರೆ (ಡಿಸೆಂಬರ್-ಜನವರಿ), ಹರಿಹರಪುರದ ಸಿದ್ಧೇಶ್ವರಸ್ವಾಮಿ ಜಾತ್ರೆ (ಫೆಬ್ರವರಿ).	
				(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ